ಶ್ರೀ ಮುಕ್ತೇಶ್ವರಸ್ವಾಮಿ ದೇವಾಲಯ, ಚೌಡಯ್ಯದಾನಪುರ |
ಶರಣ ಅಂಬಿಗರ ಚೌಡಯ್ಯರ ಗದ್ದುಗೆ |
ಮುಕ್ತೇಶ್ವರನ ದೇವಾಲಯವು ೧೨ನೇ ಶತಮಾನದಲ್ಲಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟಿತು. ದಂತಕಥೆಯ ಪ್ರಕಾರ, ಈ ದೇವಾಲಯವು ತುಂಗಭದ್ರ ನದಿಯು ಹರಿಯುವ ದಿಕ್ಕನ್ನು ಬದಲಾಯಿಸುವ ಸ್ಥಾನದಲ್ಲಿ ನೆಲೆಗೊಂಡಿದ್ದು, ಹೊಸ ಪಥದ ಪ್ರಾರಂಭದ ಸೂಚನೆಯಾಗಿದೆ ಹಾಗು ಮುಕ್ತಿಯ/ಮೋಕ್ಷದ ಸಂಕೇತವೂ ಆಗಿರುವುದರಿಂದ, ಈ ಸ್ಥಳಕ್ಕೆ ಮುಕ್ತಿಕ್ಷೇತ್ರವೆಂದೂ ಕರೆಯಲಾಗುತ್ತದೆ. ಇಲ್ಲಿ ಮುಕ್ತೇಶ್ವರಸ್ವಾಮಿಯನ್ನು (ಮುಕ್ತಿಯನ್ನು ನೀಡುವ ದೇವರನ್ನು) ಪೂಜಿಸುತ್ತಾರೆ. ಸಾಮಾನ್ಯವಾಗಿ
ನೋಡಿದರೆ, ನಮ್ಮ ಪೂರ್ವಜರು ದೇವಾಲಯಗಳನ್ನು ನಿರ್ಮಿಸಲು ನದಿಯ ದಡಕ್ಕೆ ಸಮೀಪದಲ್ಲಿರುವ ಸ್ಥಳಗಳನ್ನು ಅಥವಾ ಬೆಟ್ಟದ ಶಿಖರಗಳನ್ನು ಪವಿತ್ರ ಮತ್ತು ಸರಿಯಾದ ಜಾಗವೆಂದು ಪರಿಗಣಿಸುತ್ತಿದ್ದರು.
ಈ ಸ್ಥಳದಲ್ಲಿ ಎಂಟು ಪ್ರಮುಖ ಶಾಸನಗಳು ಕಂಡುಬಂದಿವೆ. ಉಲ್ಲೇಖನದ ಪ್ರಕಾರ ಒಂದು ಶಾಸನವು ಹೀಗೆ ಹೇಳುತ್ತದೆ, "ಇಸವಿ ೧೧೯೧ರಲ್ಲಿ ಮುಕ್ತಾಜಿಯಾರ್ ಎಂಬ ಹೆಸರಿನ ಸಂತರೊಬ್ಬರು ಈ ಸ್ಥಳಕ್ಕೆ ಆಗಮಿಸಿ, ಮುಕ್ತಿನಾಥಸ್ವಾಮಿಯನ್ನು ಸಂತುಷ್ಟಗೊಳಿಸಲು ಕಠಿಣವಾದ ಆಚರಣೆಗಳನ್ನು ನಿರ್ವಹಿಸಿದರು. ಹೀಗಾಗಿ, ಇಲ್ಲಿಯ ದೇವರನ್ನು ಮುಕ್ತೇಶನೆಂದು ಕರೆಯುತ್ತಾರೆ. ಮುಂದೆ, ಅವರು ತಮ್ಮ ಶಿಷ್ಯರಿಗೆ ಮುಕ್ತಿಯನ್ನು ದಯಪಾಲಿಸುವುದರಿಂದ ಮುಕ್ತೇಶ್ವರಸ್ವಾಮಿ ಎಂಬುದು ಬಹಳ ಸೂಕ್ತವಾದ ಹೆಸರಾಗಿತ್ತು."ದೇವಾಲಯದ ಸಂಕೀರ್ಣವು ಮುಕ್ತೇಶ್ವರಸ್ವಾಮಿಯ ಮುಖ್ಯ ದೇವಸ್ಥಾನವನ್ನು, ಕಲ್ಲಿದೇವನ ದೇವಸ್ಥಾನವನ್ನು, ಎರಡು ಸಣ್ಣ ಶಿವನ ದೇವಾಲಯಗಳನ್ನು ಹಾಗು ನಾಲ್ಕು ವಿಭಾಗಗಳನ್ನು ಹೊಂದಿರುವ ದೇವಸ್ಥಾನವೊಂದನ್ನು (ಎರಡು ಭಾಗಗಳನ್ನು ಶಿವದೇವನಿಗೆ, ಒಂದನ್ನು ವೀರಭದ್ರಸ್ವಾಮಿಗೆ ಹಾಗು ಮತ್ತೊಂದನ್ನು ಚಾಮುಂಡಿ ದೇವಿಗೆ ಸಮರ್ಪಿಸಲಾಗಿದೆ) ಒಳಗೊಂಡಿದೆ. ಸಂಕೀರ್ಣದ ಪ್ರವೇಶದ್ವಾರದಲ್ಲಿ ಸುಮಾರು ೩೦ ಅಡಿ ಎತ್ತರದ ಸ್ತಂಭವು ನಿಂತಿದೆ. ದೇವಾಲಯದ ಸಂಕೀರ್ಣದಲ್ಲಿ ಸಂತ ಶಿವದೇವರ ಗದ್ದುಗೆಯೂ ಕಾಣಿಸುತ್ತದೆ. ಇಡೀ ದೇವಾಲಯವನ್ನು ಬಹಳ ಚೆನ್ನಾಗಿ ನಿರ್ವಹಿಸಲಾಗುತ್ತಿದೆ.
ಶ್ರೀ ಮುಕ್ತೇಶ್ವರಸ್ವಾಮಿ ದೇವಾಲಯ |
ಶ್ರೀ ಮಹೇಶ್ವರ ದೇವರು |
ಸುಖನಾಸಿಯ ಬಾಗಿಲಿನ ಚೌಕಟ್ಟು ಹಾಗು ಲಲಾಟ |
ಶಾಸನಗಳು |
ಸಂತ ಶಿವದೇವರ ಗದ್ದುಗೆ |
ವೀರಭದ್ರಸ್ವಾಮಿ, ಶಿವದೇವ ಹಾಗು ಚಾಮುಂಡಿ ದೇವಿಯ ದೇವಾಲಯಗಳು |
ಕಲ್ಲಿದೇವ ಹಾಗು ಎರಡು ಸಣ್ಣ ಶಿವನ ದೇವಾಲಯಗಳು |
ಮುಕ್ತೇಶ್ವರನ ದೇವಾಲಯವು ದ್ವಿಕೂಟ ದೇವಾಲಯವಾಗಗಿದ್ದು, ಎರಡು ಗರ್ಭಗೃಹಗಳನ್ನು ಹೊಂದಿದೆ. ಈ ದೇವಾಲಯವು ಚಾಲುಕ್ಯರ ಯುಗದ ಶೈಲಿ, ಸಂಸ್ಕೃತಿ, ಹಾಗು ವಾಸ್ತುಶಿಲ್ಪವನ್ನು ಚಿತ್ರಿಸುವ ಮೇರುಕೃತಿಯಾಗಿದೆ. ಜಕಣಾಚಾರಿ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯಕ್ಕೆ ಪೂರ್ವಾಭಿಮುಖ ಹಾಗು ದಕ್ಷಿಣಾಭಿಮುಖಗಳಲ್ಲಿ ಎರಡು ಪ್ರವೇಶದ್ವಾರಗಳಿವೆ. ಎರಡೂ ಪ್ರವೇಶದ್ವಾರಗಳು ಸುಂದರವಾದ ಮುಖಮಂಟಪಗಳನ್ನು ಹೊಂದಿದೆ. ಬಾಗಿಲಿನ ಚೌಕಟ್ಟುಗಳು ಅಲಂಕಾರಿಕವಾಗಿ ಹಾಗು ಅತಿಶ್ರೇಷ್ಠವಾಗಿದ್ದು, ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪವನ್ನು ವರ್ಣಿಸುತ್ತದೆ. ಮುಖ್ಯದ್ವಾರಗಳ ಬಾಗಿಲುಗಳ ಲಲಾಟದಲ್ಲಿ ಮಹೇಶ್ವರಸ್ವಾಮಿಯ ಉಬ್ಬುಶಿಲ್ಪಗಳಿವೆ. ಗರ್ಭಗೃಹದಲ್ಲಿ ಸಣ್ಣ ಶಿವಲಿಂಗವಿದೆ. ಸುಖನಾಸಿಯ ಬಾಗಿಲ ಚೌಕಟ್ಟು ಸಹ ಬಹಳ ನೈಪುಣ್ಯತೆಯಿಂದ ನಿರ್ವಹಿಸಲಾಗಿದೆ. ಪೂರ್ವದಲ್ಲಿರುವ ಪ್ರವೇಶದ್ವಾರದ ಎದುರು ಮಂಟಪವಿದೆ. ದೇವಾಲಯದ ಹೊರಗೋಡೆಗಳು ಶಿವನ, ಗಣೇಶನ, ಸರಸ್ವತಿಯ, ಕೃಷ್ಣನ, ಸೂರ್ಯನ, ಹಾಗು ಇತರ ದೇವ ದೇವತೆಗಳ ಕೆತ್ತನೆಗಳನ್ನು ಹೊಂದಿವೆ. ಹೊರಗಿನ ಗೋಡೆಯ ಮೇಲಿನ ಕಲಾತ್ಮಕ ರಚನೆಯು ಶ್ಲಾಘನೀಯವಾದುದು. ಅರ್ಚಕರ ಗೈರುಹಾಜರಿಯಲ್ಲಿಯೂ ಈ ದೇವಾಲಯದ ಬಾಗಿಲು ದಿನವಿಡೀ ತೆರೆದಿರುತ್ತದೆ. ನಿಸ್ಸಂಶಯವಾಗಿ, ಈ ದೇವಾಲಯವನ್ನು ಒಳ್ಳೆಯ ನಿರ್ವಹಣೆಯುಳ್ಳ ದೇವಾಲಯಗಳಲ್ಲೊಂದೆಂದು ಪರಿಗಣಿಸಬಹುದು.
ಈ ಲೇಖನದ ಸಂಪಾದನೆಯಲ್ಲಿ ನಮಗೆ ಸಹಾಯ ಮಾಡಿದ ಶ್ರೀ ರಂಜಿತ್ ಅಡಿಗರವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ನೀಡಲು ಬಯಸುತ್ತೇವೆ.
To read this article of "Sri Muktesvara Temple, Chaudayyadanapura" in English, click here.
ದೇವಾಲಯದ ಶಿಖರ |
ದೇವಕೋಷ್ಟ |
To read this article of "Sri Muktesvara Temple, Chaudayyadanapura" in English, click here.
No comments:
Post a Comment