Thursday, November 7, 2019

ಡಂಬಳದ ಗುಡಿಗಳು

ಡಂಬಳ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಒಂದು ಪುಟ್ಟ ಗ್ರಾಮ. ಇಲ್ಲಿನ ದೊಡ್ಡ ಬಸಪ್ಪ ಗುಡಿಯು ಕನ್ನಡ ನಾಡಿನ ಹೆಮ್ಮಯ ಪ್ರತೀಕವೆಂದರೆ ತಪ್ಪಲ್ಲ. ಕಲ್ಯಾಣದ ಚಾಲುಕ್ಯರು ನಿರ್ಮಿಸಿದ ಪ್ರಮುಖ ದೇವಾಲಯಗಲ್ಲಿ ಡಂಬಳದ ದೊಡ್ಡಬಸಪ್ಪನ ಗುಡಿಯೂ ಒಂದು. ಡಂಬಳದಲ್ಲಿ ಸುಮಾರು ಗುಡಿಗಳಿವೆ. ಅದರಲ್ಲಿ ಸೋಮೇಶ್ವರನ ಗುಡಿ, ಜಪದ ಬಾವಿ, ಕಲ್ಲೇಶ್ವರನ ಗುಡಿ ಪ್ರಮುಖವಾದುದು. ಡಂಬಳದ ಪ್ರಾಚೀನ ಕೋಟೆಯಲ್ಲಿ ಸುಮಾರು ಐತಿಹಾಸಿಕ ಕುರುಹುಗಳು ಸಿಗುತ್ತದೆ.  ಇಲ್ಲಿ ಒಂದು ಗಣೇಶನ ಗುಡಿಯು ಇದೆ. ಇಲ್ಲಿ ಜೈನರ ಬಸದಿ ಹಾಗೂ ಬೌದ್ಧ ವಿಹಾರಗಳು ಇದ್ದವು ಎಂಬುವುದಕ್ಕೂ ಬಹಳಷ್ಟು ಕುರುಹುಗಳು ದೊರೆಯುತ್ತದೆ. ಆದರೆ ಇವತ್ತಿಗೆ ಇವು ಸಂಪೂರ್ಣವಾಗಿ ನಶಿಸಿ ಹೋಗಿದೆ. ಇದು ಆ ಕಾಲಕ್ಕೆ ಒಂದು ಸರ್ವ ಧರ್ಮ ಕ್ಷೇತ್ರವಾಗಿತ್ತು. ಹಾಗು ಆಧುನಿಕ ಕಾಲದಲ್ಲೂ ಅನೇಕ ಧಾರ್ಮಿಕ ಕಾರ್ಯಗಳಿಗೆ ಪ್ರಸಿದ್ಧವಾಗಿದೆ. ಶಾಸನಗಳಲ್ಲಿ ಡಂಬಳವು ಧರ್ಮವೊಲ ಹಾಗೂ  ಧರ್ಮಾಪುರವೆಂದು ಕರೆಯಲ್ಪಟ್ಟಿದೆ.
ದೊಡ್ಡ ಬಸಪ್ಪನ ಗುಡಿ, ಡಂಬಳ
 ದೊಡ್ಡ ಬಸಪ್ಪನ ಗುಡಿಯು ತನ್ನ ಮೂಲ ಸೌಂದರ್ಯವನ್ನು ಉಳಿಸಿಕೊಂಡಿದೆ. ಅಡಿಯಿಂದ ಮುಡಿಯವರಿಗೆ ನಕ್ಷತ್ರಾಕಾರದ ವಿನ್ಯಾಸವನ್ನು ಹೊಂದಿರುವ ಈ ದೇವಾಲಯ ಭಾರತದ ವಾಸ್ತುಶಿಲ್ಪ ಅಧ್ಯಯನಕ್ಕೆ ವಿಶೇಷ ಉದಾಹರಣೆ. ಹೆನ್ರಿ ಕೋಸೆನ್ಸ್ರವರು ಈ ದೇವಾಲಯದ ನಿರ್ಮಾಣವು ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ದೇವಾಲಯವು ಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಹಾಗೂ ನಂದಿಮಂಟಪಗಳನ್ನು ಹೊಂದಿದೆ. ದೇವಾಲಯದ ಎಲ್ಲ ಭಾಗಗಳು ವಿಶಾಲವಾಗಿದ್ದು ಚಾಲುಕ್ಯರ ಶೈಲಿಯ ಅಚ್ಚು ಹೊಂದಿದೆ. ದೇವಾಲಯದ ಆವರಣದಲ್ಲಿ ಒಂದು ಚಿಕ್ಕ ಬಾವಿ ಇದೆ. ಇಲ್ಲಿನ ಒಂದು ಶಾಸನದ ಪ್ರಕಾರ ಈ ದೇವಾಲಯವನ್ನು ಸ್ವಯಂಭು ಈಶ್ವರನ ಗುಡಿಯೆಂದು ಕರೆಯುತಿದ್ದರು. ದೇವಾಲಯದ ನಂದಿಮಂಟಪದಲ್ಲಿ ಇರುವ ದೊಡ್ಡ ನಂದಿಯ ಮೂರ್ತಿಯಿಂದಾಗಿಯೇ ಈಗ ಈ ದೇವಾಲಯವನ್ನು ದೂಡ ಬಸಪ್ಪನ ಗುಡಿ ಎಂದು ಕರೆಯುತ್ತಾರೆ. ಈ ದೇವಾಲಯದ ಕಾಲ ಸುಮಾರು ೧೧ನೇಯ ಶತಮಾನ ಹಾಗು ಚಾಲುಕ್ಯ ರಾಜಾ ವಿಕ್ರಮಾದಿತ್ಯ VI ರ ರಾಣಿಯಾದ ಲಕ್ಷ್ಮೀದೇವಿಯ ಆಳ್ವಿಕ ಸಮಯದಲ್ಲಿ ಕಟ್ಟಲ್ಪಟ್ಟಿತ್ತು. 
ನಕ್ಷತ್ರಾಕಾರದ ಶಿಖರ
ದೊಡ್ಡ ಬಸ್ಸಪ್ಪ ಹಾಗೂ ಚಿಕ್ಕ ಬಸ್ಸಪ್ಪನ ಮೂರ್ತಿಗಳು
ಬಾಗಿಲವಾಡದ ಲಲಾಟದಲ್ಲಿ ಗಜಲಕ್ಷ್ಮೀ ದೇವಿಯ ಉಬ್ಬುಶಿಲ್ಪ
ಬಾಗಿಲವಾಡದ ಏಳು ಪಟ್ಟಿಕೆಗಳಲ್ಲಿ  ದ್ವಾರಪಾಲಕರ ಕೆತ್ತನೆಗಳು
ಸ್ವಯಂಭು ಈಶ್ವರನ ಲಿಂಗ
ನೃತ್ಯಭಂಗಿಯಲ್ಲಿರುವ ಭಕ್ತರ  ಉಬ್ಬುಶಿಲ್ಪ
ಚಿಕ್ಕ ಬಾವಿ
ದೊಡ್ಡ ಬಸಪ್ಪನಗುಡಿಯ ಹಿಂಭಾಗದಲ್ಲಿ ಸುಮಾರು ೧೦೦ ಮೀಟರ್ ದೂರದಲ್ಲಿ ಇನ್ನೊಂದು ಸುಂದರ ದೇವಾಲಯವಿದೆ. ಈ ದೇವಾಲಯವನ್ನು ಸೋಮೇಶ್ವರಗುಡಿ ಎಂದು ಕರೆಯುತ್ತಾರೆ. ಹಿಂದೆ ಈ ಗುಡಿಯನು ಮೈಲಬೇಶ್ವರನ ಗುಡಿ ಎಂದು ಶಾಸನದಲ್ಲಿ ಕರೆಯಲ್ಪಟ್ಟಿದೆ. ಈ ಗುಡಿಯನ್ನು ಚಾಲುಕ್ಯ ದೊರೆ ಸೋಮೇಶ್ವರ I ರವರ ರಾಣಿಯಾದ ಮೈಲಾದೇವಿಯ ನೆನಪಿಗೆ ಕಟ್ಟಿದ್ದರು ಹಾಗೂ ಮುಂದಿನ ದಿನಗಳಲ್ಲಿ ಸೋಮೇಶ್ವರನ ಗುಡಿ ಎಂದು ಬದಲಾಯಿತು. ಈ ಗುಡಿಯ ಗರ್ಭಗೃಹ ಚೌಕಾಕಾರದ ರೂಪದಲ್ಲಿದ್ದು ಅಂತರಾಳ, ತೆರೆದ ಸಭಾಮಂಟಪ ಹಾಗೂ ಮುಖಮಂಟಪವನ್ನು  ಹೊಂದಿದೆ. ಇವೆರಡು ಗುಡಿಗಳು ಊರಿನ ಹೊರಭಾಗದಲ್ಲಿದ್ದು ತಕ್ಕ ಮಟ್ಟಿಗೆ ಸುಸ್ಥಿತಿಯಲ್ಲಿದೆ. ಹಳೇಕೋಟೆಯ ಭಾಗದಲ್ಲಿ ಒಂದು ವಿಶಾಲವಾದ ಕೆರೆಯಿದೆ, ಈ ಕೆರೆಯನ್ನು ಶಾಸನದಲ್ಲಿ ಗೋಣಸಮುದ್ರ ಎಂದು ಕರೆದಿದ್ದಾರೆ. ಈ ಕೆರೆಯ ಏರಿಯಲ್ಲಿ ಆ ಕಾಲದ ತೂಬನ್ನು ಈಗಲೂ ಕಾಣಬಹುದು. ಸುತ್ತಲೂ ಕಲ್ಲಿನ ಗೋಡೆಯ ಕೋಟೆಯ ಅವಶೇಷಗಳನ್ನೂ ಕಾಣಬಹುದು.
ಶ್ರೀ ಸೋಮೇಶ್ವರ ಗುಡಿ
ಗೋಣಸಮುದ್ರ ಕೆರೆ 
ಡಂಬಳದ ಕೋಟೆ
ಅಲ್ಲಿಂದ ಸ್ವಲ್ಪ ದೂರದಲ್ಲಿ ಮರುನಿರ್ಮಾಣವಾದ ಕಲ್ಲೇಶ್ವರನ ಗುಡಿ ಇದೆ, ದೇವಾಲಯದ ಉಳಿದ ಭಾಗಗಳನ್ನು ಉಪಯೋಗಿಸಿ ಪುನರ್ಪ್ರತಿಷ್ಟೆ ಮಾಡಲಾಗಿದೆ. ಈ ಗುಡಿ ಗರ್ಭಗೃಹ, ಅಂತರಾಳ ಹಾಗೂ ನವರಂಗವನ್ನು ಹೊಂದಿದೆ. ಈ ಗುಡಿಯ ಬಳಿಯಲ್ಲಿ ಒಂದು ಸುಂದರವಾದ ಬಾವಿ ಇದೆ, ಈ ಬಾವಿಯನ್ನು ಜಪದ ಬಾವಿಯೆಂದು ಕರಿಯುತ್ತಾರೆ. ಸ್ವಲ್ಪ ವರ್ಷಗಳ ಹಿಂದೆ ಇದನ್ನು ಭೂಶೋಧನೆ ಮಾಡಿದರು. ಈ ಬಾವಿಯ ಸುತ್ತು ೧೫ ಚಿಕ್ಕ ಗುಡಿಗಳಲ್ಲಿ  ೧೨ನೇ ಶತಮಾನದಲ್ಲಿ ಋಷಿಗಳು ಕೂತು ಜಪ ಮಾಡುತ್ತಿದ್ದರು ಎಂಬ ಪ್ರತೀತಿಯಿದೆ. ಈ ಬಾವಿಯ ನೋಟವು ಅತೀ ಸುಂದರ ಹಾಗೂ ತುಂಬ ಪ್ರಶಾಂತವಾಗಿತ್ತು. ಒಟ್ಟಾರೆ ಡಂಬಳವು ನಮ್ಮ ನಾಡಿನ ಹಾಗೂ ಕಲ್ಯಾಣ ಚಾಲುಕ್ಯರ ಕಲಾಕೃತಿಗೆ ಒಂದು ಅದ್ಭುತ ಉದಾಹರಣೆಯಾಗಿ ನಿಲ್ಲುತ್ತದೆ.
ಶ್ರೀ ಕಲ್ಲೇಶ್ವರ ಗುಡಿ
ಜಪದ ಬಾವಿ
ಲೇಖನದ ಸಂಪಾದನೆಯಲ್ಲಿ ನಮಗೆ ಸಹಾಯ ಮಾಡಿದ ಶ್ರೀ ರಂಜಿತ್ ಅಡಿಗ ರವರಿಗೆ ಹೃತ್ಪೂರ್ವಕ ಧನ್ಯವಾದಗಳು. 

ಉಲೇಖನ ಪಟ್ಟಿ:
೧.  ಧಾರವಾಡ ಜಿಲ್ಲಾ ಗ್ಯಾಸೆಟಿಯರ್
೨.  ಕರ್ನಾಟಕ ದೇವಾಲಯ ಕೋಶ - ಗದಗ ಜಿಲ್ಲೆ

ಸಂಬಂಧಿತ ಲೇಖನಗಳು:
೧. ಶ್ರೀ  ಮುಕ್ತೇಶ್ವರಸ್ವಾಮಿ ದೇವಾಲಯ, ಚೌಡಯ್ಯದಾನಪುರ
೨. ಕರ್ನಾಟಕದ ದೇವಾಲಯಗಳು  
೩. ಕರ್ನಾಟಕದ ಕೋಟೆಗಳು

1 comment:

  1. ನಿಮ್ಮ ಈ ಬರಹ ಬಹಳ ಚೆನ್ನಾಗಿದ್ದು, ಈ ಕ್ಷೇತ್ರದ ಭೂತ ಹಾಗೂ ವರ್ತಮಾನ ಸ್ಥಿತಿ-ಗತಿಗಳ ಬಗ್ಗೆ ಮನದಟ್ಟು ಮಾಡುವಂತಿದೆ. ಇಂತಹಕ್ಷೇತ್ರಕ್ಕೆ ಭೇಟಿ ನೀಡಿ, ನಮ್ಮೆಲ್ಲರುಗೂ ಪರಿಚಯಿಸಿದ್ದಕ್ಕಾಗಿ ನಿಮಗೆ ನನ್ನ ಅಭಿನಂದನೆಗಳು 🙏.

    ReplyDelete